ರಕ್ತಹೀನತೆ/ಅನೀಮಿಯಾ

ರಕ್ತಹೀನತೆ ಒಂದು ಕಾಯಿಲೆಯೂ ಹೌದು ಹಾಗೂ ಇತರೆ ಕಾಯಿಲೆಗಳ ರೋಗ ಲಕ್ಷಣವೂ ಹೌದು. ಈ ಕಾಯಿಲೆಯಲ್ಲಿ ನಮ್ಮ ರಕ್ತದಲ್ಲಿರುವ ಕೆಂಪುರಕ್ತ ಕಣಗಳ/ಜೀವಕೋಶಗಳ ಸಂಖ್ಯೆಯು ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗಿರುತ್ತದೆ ಅಥವಾ ಹೀಮೋಗ್ಲೋಬಿನ್ ಪ್ರಮಾಣವು ರಕ್ತದಲ್ಲಿ ಕಡಿಮೆ ಆಗಿರುತ್ತದೆ. ಹೀಮೊಗ್ಲೋಬಿನ್ ದೇಹದ ಎಲ್ಲಾ ಜೀವಕೋಶಗಳಿಗೆ ಆಮ್ಲಜನಕವನ್ನು ತೆಗೆದುಕೊಂಡು ಹೋಗಿ ಕೊಡುತ್ತದೆ. ಅದೇ ಹೀಮೊಗ್ಲೋಬಿನ್ ನ ಪ್ರಮಾಣವು ಕಡಿಮೆ ಆದಲ್ಲಿ ಜೀವಕೋಶಗಳಿಗೆ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಹಾಗೂ ಅವುಗಳ ಕಾರ್ಯಕ್ಷಮತೆಗೆ ಹಾಗೂ ಜೀವಾವಧಿಗೂ ತೊಂದರೆಯಾಗಿ ಅವುಗಳು ಸತ್ತುಹೋಗಿ, ಅಂಗಾಂಗಳ ನಿಷ್ಕ್ರಿಯತೆಗೆ ಕಾರಣವಾಗಿ ಅನೇಕ ಕಾಯಿಲೆಗಳನ್ನು ಉಂಟುಮಾಡಬಹುದು. 

ರಕ್ತದಲ್ಲಿನ ಸಾಮಾನ್ಯ ಹೀಮೊಗ್ಲೋಬಿನ್ ಪ್ರಮಾಣ = ಪುರುಷರಲ್ಲಿ : 13–17 g/dL

                                                        ಮಹಿಳೆಯರಲ್ಲಿ : 11–15 g/dL

ರಕ್ತಹೀನತೆ ಕಡಿಮೆ ಪ್ರಮಾಣದ್ದಾಗಿ, ಅಲ್ಪಾವಧಿಯದಾಗಿದ್ದರೆ ಅದನ್ನು ಶೀಘ್ರವೇ ಉತ್ತಮ ಆಹಾರ ಹಾಗೂ ಪೌಷ್ಟಿಕಾಂಶಗಳ ಪೂರೈಕೆಯಿಂದ ಗುಣಪಡಿಸಬಹುದು. ಅದೇ ಧೀರ್ಘಕಾಲೀನ ಗಂಭೀರ ಸ್ಥಿತಿಯದ್ದಾಗಿದ್ದರೆ ಚಿಕಿತ್ಸೆ ಸುಲಭಾವಾಗುವುದಿಲ್ಲ.  ಇದು ಮಾರಣಾಂತಿಕವೂ ಆಗಿರಬಹುದು.

ವಿಧಗಳು ಮತ್ತು ಕಾರಣಗಳು :

ರಕ್ತಹೀನತೆಯಲ್ಲಿ ೪೦೦ಕ್ಕೂ ಹೆಚ್ಚು ಬಗೆಗಳಿದ್ದು, ಮುಖ್ಯವಾಗಿ ಅವುಗಳನ್ನು ಮೂರು ವಿಧಗಳಾಗಿ ವಿಂಗಡಿಸಬಹುದು.

  • ರಕ್ತಸ್ರಾವದಿ೦ದ ಆಗುವ ರಕ್ತಹೀನತೆ- ಕಾರಣಗಳು: 
  • ಉದರ-ಕರುಳು ಸಂಬಂಧಿ – ಹುಣ್ಣುಗಳು, ಜಠರದುರಿತ, ಮೂಲವ್ಯಾಧಿ ಮತ್ತು ಕ್ಯಾನ್ಸರ್
  • ಅತಿಯಾದ ಔಷಧಿಗಳ ಸೇವನೆ: ಆಸ್ಪಿರಿನ್, ಐಬುಪ್ರೋಫಿನ್ 
  • ಋತು ಚಕ್ರದ ರಕ್ತ ಸ್ರಾವ, ಮಗುವಿಗೆ ಜನ್ಮ ನೀಡುವಾಗ( ಹೆಚ್ಚು ಮಕ್ಕಳ ತಾಯಂದಿರಲ್ಲಿ) 
  • ಕೆಂಪು ರಕ್ತ ಕೋಶಗಳ ಕುಂಠಿತ ಉತ್ಪಾದನೆಯಿಂದಾಗಿ ಅಥವಾ ದೋಷಯುಕ್ತ ಕೋಶಗಳ ಉತ್ಪಾದನೆ.
  • ಸಿಕಲ್ಸೆಲ್ ರಕ್ತಹೀನತೆ/ಕುಡುಗೋಲು ಆಕಾರದ ಕೆಂಪು ರಕ್ತ ಕೋಶಗಳ ಉತ್ಪತ್ತಿ.
  • ಕಬ್ಬಿಣಾಂಶ ಕೊರತೆಯ ರಕ್ತಹೀನತೆ 
  • ಜೀವಸತ್ವಗಳ ಕೊರತೆಯ ರಕ್ತಹೀನತೆ 
  • ಮೂಳೆ ಮಜ್ಜೆ  ಹಾಗು ಸ್ಟೆಮ್ ಕೋಶಗಳ ಸಂಬಂಧಿ ರಕ್ತಹೀನತೆ 
  • ಇತರೆ ಅನಾರೋಗ್ಯಗಳಿಂದಾಗಿ :ಮೂತ್ರಪಿಂಡಗಳ ವೈಫಲ್ಯತೆ ,ಕ್ಯಾನ್ಸರ್,ಥೈರೈಡ್ ಗ್ರಂಥಿ ಸಂಬಂಧಿ. ಆಮವಾತ ಇತ್ಯಾದಿ 

 

  • ಕೆಂಪು ರಕ್ತ ಕೋಶಗಳ ವಿನಾಶದಿಂದ: 
  • ಸಿಕಲ್ಸೆಲ್ ರಕ್ತಹೀನತೆ, ತಲಸ್ಸೇಮಿಯ
  • ಸೋಂಕುಗಳು, ಔಷಧಿಗಳಿಂದ,ಹಾವಿನ /ಜೇಡದ ವಿಷ , ಕೆಲವು ಆಹಾರಗಳಿಂದ 
  • ಮೂತ್ರಪಿಂಡ,ಯಕೃತ್ತಿನ ರೋಗಗಳ ಕೊನೆ ಹಂತದಲ್ಲಿ ಬಿಡುಗಡೆಯಾಗುವ ವಿಷಪದಾರ್ಥಗಳು
  • ರೋಗನಿರೋಧಕ ವ್ಯವಸ್ಥೆಯಿಂದ ದೇಹಕ್ಕೆ ಅಸಮಂಜಸ ಆಕ್ರಮಣ 
  • ಕ್ಯಾನ್ಸರ್ ಗೆಡ್ಡೆಗಳು, ಸಂಪೂರ್ಣ ಸುಟ್ಟ ಗಾಯಗಳಿಂದ , ರಾಸಾಯನಿಕಗಳಿಂದ ಹಾನಿ,ಅಧಿಕ ರಕ್ತದೊತ್ತಡ , ರಕ್ತಹೆಪ್ಪುಗಟ್ಟುವಿಕೆಯ ನ್ಯೂನತೆ
  • ಗುಲ್ಮದ ವಿಸ್ತರಣೆಯಿಂದಾಗಿ  

ರಕ್ತಹೀನತೆಯ ಲಕ್ಷಣಗಳು:

ಉಸಿರಾಡಲು ಕಷ್ಟಪಡುವುದು 

ಎದೆ ನೋವು

ಕೈಕಾಲುಗಳು ತಣ್ಣಗಾಗುವಿಕೆ

ಪೇಲವ ಹಾಗು ಮಂಕಾದ ಚರ್ಮ, ಕಣ್ಣಿನ ಕೆಳರೆಪ್ಪೆ ಮತ್ತು ಉಗುರುಗಳ ಕೆಳಗೆ ಬಿಳಿಯಾಗಿ ಇರುವುದು 

ತಲೆನೋವು

ನಿತ್ರಾಣ

ವಸಡು ಹಾಗು ಗಂಟಲು ನೋವು 

ಕುಂದಿದ ನೆನಪಿನ ಶಕ್ತಿ

ಖಿನ್ನತೆ

ತಗ್ಗಿದ ರಕ್ತದೊತ್ತಡ 

ಹೆಚ್ಚಾದ ಎದೆ ಬಡಿತ 

ರುಚಿಗೆಟ್ಟ ನಾಲಿಗೆ 

ಮನೆ ಮದ್ದುಗಳು :

ಆಹಾರ ಸಂಬಂಧಿ ರಕ್ತಹೀನತೆಗೆ ಪೇಯ :

ಹಾಲು

ಬಾದಾಮಿ

ಒಣದ್ರಾಕ್ಷಿ 

ಅಂಜೂರ 

ಒಂದು ಲೋಟ ಹಾಲಿಗೆ,೧ ಅಂಜೂರ, ೨ ಒಣದ್ರಾಕ್ಷಿ,೨ ಬಾದಾಮಿ ತೆಗೆದುಕೊಳ್ಳಿ. ಈ ಒಣ ಹಣ್ಣುಗಳನ್ನು ಚೆನ್ನಾಗಿ ತೊಳೆದುಕೊಂಡು, ಸ್ವಲ್ಪ ಜಜ್ಜಿಕೊಳ್ಳಿ, ಕಾಯಿಸಿ ಆರಿಸಿರುವ ಹಾಲನ್ನು ಮತ್ತೊಮ್ಮೆ ಬಿಸಿ ಮಾಡಲು ಬಾಣಲೆಗೆ ಹಾಕಿ , ತಕ್ಷಣವೇ ಈ ಹಣ್ಣುಗಳನ್ನು ಹಾಕಿ , ೫ ನಿಮಿಷ ಮಂದ ಉರಿಯಲ್ಲಿ ಬೇಯಿಸಿ . ನಂತರ ಇಳಿಸಿ , ಸೋಸದೆಯೇ ಸೇವಿಸಿ.

 ತರಕಾರಿಗಳ ಪೇಯ :

ಬೀಟ್ರೂಟ್

ಕ್ಯಾರೆಟ್ 

ಜೇನುತುಪ್ಪ 

ಕ್ಯಾರೆಟ್- ಬೀಟ್ರೂಟ್ ಗಳನ್ನು ಶುದ್ದವಾಗಿ ತೊಳೆದುಕೊಂಡು, ರುಬ್ಬಿಕೊಳ್ಳಿರಿ, ಒಂದು ಬಟ್ಟಲಲ್ಲಿ ೪ ಚಮಚ ಬೀಟ್ರೂಟ್ರಸ ಮತ್ತು ತಿರುಳು ಹಾಗೂ ೪ ಚಮಚ ಕ್ಯಾರೆಟ್ ರಸದ ತಿರುಳನ್ನು ತೆಗೆದುಕೊಳ್ಳಿ. ಮಿಶ್ರಣ ಮಾಡಿ , ಬೇಕಿದ್ದಲ್ಲಿ ಮೂಲಂಗಿ ರಸವನ್ನೂ ಸೇರಿಸಿಕೊಳ್ಳಬಹುದು , ನಂತರ ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಿ, ಕಲಸಿ, ಸೇವಿಸಿರಿ.

ಉಪಯೋಗ:

ರಕ್ತದ ಕಬ್ಬಿಣಾಂಶವನ್ನು ಹೆಚ್ಚಿಸುತ್ತದೆ,

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತವೆ, ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ.

ಬೊಜ್ಜು ಕಡಿಮೆ ಮಾಡಿ , ರಕ್ತಹೀನತೆ ನಿವಾರಿಸುತ್ತದೆ.  ಈ ಪೇಯವು ಮಾನಸಿಕ ಒತ್ತಡವನ್ನೂ ಕಡಿಮೆ ಮಾಡುವಲ್ಲಿ ಸಹಕಾರಿ.

ಆಹಾರ ಚಿಕಿತ್ಸೆ 

ಕಬ್ಬಿಣಾಂಶವೃದ್ಧಿ ಪೇಯ:

ಬೀಟ್ರೂಟ್/ಗಾಜರುಗಡ್ಡೆ

ಕ್ಯಾರೆಟ್/ಗೆಜ್ಜರಿ

ಹಸಿ ಶುಂಠಿ

ಟೊಮ್ಯಾಟೋ

ಇವೆಲ್ಲವನ್ನೂ ಚೆನ್ನಾಗಿ ತೊಳೆದು ,ಚಿಕ್ಕದಾಗಿ ಕತ್ತರಿಸಿ ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಿ , ತಾಜಾಇರುವಾಗಲೇ ಸೇವಿಸಿ.

ಉಪಯೋಗ: ಬೀಟ್ರೂಟ್, ಕ್ಯಾರೆಟ್,ಹಸಿ ಶುಂಠಿ ಗಳು ರಕ್ತದ ಕಬ್ಬಿಣಾಂಶವನ್ನು ಹೆಚ್ಚಿಸುತ್ತವೆ ,ಹಾಗೂ ಟೊಮ್ಯಾಟೋ ಈ ಕಬ್ಬಿಣಾಂಶ ದೇಹಕ್ಕೆ ಸೇರಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.

ಸಸ್ಯಾಹಾರದಲ್ಲಿ ಸಿಗುವ ಕಬ್ಬಿಣಾಂಶವು ದೇಹಕ್ಕೆ ಸುಲಭವಾಗಿ ಸೇರಿಕೊಳ್ಳುವುದಿಲ್ಲ,ಆದ್ದರಿಂದ ಜೊತೆಗೆ ‘ಸಿ’ಜೀವಸತ್ವದ ಅವಶ್ಯಕತೆ ಇರುತ್ತದೆ,ಆಗ ಮಾತ್ರ ಕಬ್ಬಿಣಾಂಶ ದೇಹ ಸೇರುತ್ತದೆ.

ಸೊಪ್ಪಿನ ರಸಗಳು :

ನುಗ್ಗೆಸೊಪ್ಪಿನ ರಸದ ಜೊತೆ ಕಪ್ಪು ಬೆಲ್ಲ ಬೆರೆಸಿ ಸೇವಿಸಿದರೆ ಹೀಮೋಗ್ಲೋಬಿನ್ ಪ್ರಮಾಣವು ರಕ್ತದಲ್ಲಿ ವೃದ್ಧಿಯಾಗುತ್ತದೆ. ೧ ಲೋಟದಷ್ಟು ಪ್ರತಿ ದಿನ ೧೫ ದಿನಗಳವರೆಗೆ ಸೇವಿಸಿ.

ಹಚ್ಚ ಹಸುರಿನ ಸೊಪ್ಪಿನ ರಸಗಳು ಕಬ್ಬಿಣಾಂಶವನ್ನು ದೇಹಕ್ಕೆ ಒದಗಿಸುತ್ತವೆ.

ಕೊತ್ತಂಬರಿ, ಕರಿಬೇವು,ಪಾಲಕ್ ,ಮೆಂತ್ಯ ಇತ್ಯಾದಿ. ಈ ಸೊಪ್ಪಿನ ರಸದ ಜೊತೆ ಸ್ವಲ್ಪ ಟೊಮ್ಯಾಟೋವನ್ನು ಕೂಡ ಸೇವಿಸಿ.ಇದರಲ್ಲಿರುವ ವಿಟಮಿನ್ ಸಿ , ಕಬ್ಬಿಣಾಂಶವು ದೇಹ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಅಥವಾ ನಿಂಬೆಹಣ್ಣು (ವಿಟಮಿನ್ ಸಿ) ಕೂಡಾ ಸಹಾಯಕಾರಿಯಾಗಿದೆ.

 

ಕಬ್ಬಿಣದ ಪಾತ್ರೆಯಲ್ಲಿ ಹಾಲನ್ನು ಕಾಯಿಸಿ ಅದಕ್ಕೆ ೮-೧೦ ಕಾಳುಮೆಣಸುಗಳನ್ನು ಹಾಕಿ ೫ ನಿಮಿಷ ಕುದಿಸಬೇಕು. ಈ ಹಾಲನ್ನು ಸೇವಿಸುವುದರಿಂದ ಹೀಮೋಗ್ಲೋಬಿನ್ ಅಂಶವು ಹೆಚ್ಚುತ್ತದೆ.

ಕಪ್ಪು ಎಳ್ಳು :

ಇದರಲ್ಲೂ ಕಬ್ಬಿಣಾಂಶವು ಹೇರಳವಾಗಿದೆ , ಆದ್ದರಿಂದ ಎಲ್ಲಾ ಹಣ್ಣು ತರಕಾರಿಗಳ ರಸಗಳೊಂದಿಗೆ ಸೇರಿಸಿ ಸೇವಿಸಬಹುದು.

ಬಾಳೆಹಣ್ಣು , ಸೇಬು ,ಪೇರಳೆ/ಸೀಬೆ ಹಣ್ಣು, ದಾಳಿಂಬೆ ರಸ, ಈ ಹಣ್ಣುಗಳನ್ನು ಪ್ರತಿನಿತ್ಯ ಸೇವಿಸಿರಿ. ಸೀಬೆ ಹಣ್ಣಿನ ವಿಟಮಿನ್ ಸಿ ಯು ಉಳಿದ ಆಹಾರ ಪದಾರ್ಥಗಳ ಕಬ್ಬಿಣಾಂಶವನ್ನು ದೇಹಕ್ಕೆ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

 

ನೆಲ್ಲಿಕಾಯಿ ಹಾಗು ಜೇನುತುಪ್ಪ ಸೇವನೆ.

ಉಪ್ಪಿನ ಉಪಯೋಗವನ್ನು ಕಡಿಮೆ ಮಾಡಿರಿ, ಉಪ್ಪು ಕಬ್ಬಿಣಾಂಶವನ್ನು ದೇಹಕ್ಕೆ ಸೇರಿಸುವಲ್ಲಿ ತೊಡಕು ಉಂಟು ಮಾಡುತ್ತದೆ.

ಕರಿದ ಪದಾರ್ಥಗಳೂ ಕೂಡ ಕಬ್ಬಿಣದ ಹೀರಿಕೆಯನ್ನು ತಡೆಯುತ್ತವೆ. ಆದ್ದರಿಂದ ಅವನ್ನು ತ್ಯಜಿಸಿ, ನೈಸರ್ಗಿಕ ಆಹಾರದ ಮೊರೆ ಹೋಗಿ.

ಅನಿಯಮಿತ ಚಹಾದ ಸೇವನೆಯೂ ಕಬ್ಬಿಣಾಂಶ ದೇಹಕ್ಕೆ ಸೇರುವುದನ್ನು ತಡೆಯುತ್ತದೆ ಹಾಗು ರಕ್ತಹೀನತೆಗೆ ಕಾರಣವಾಗುತ್ತದೆ.

ಈ ರೀತಿಯಾಗಿ ಮೇಲಿನ ನೈಸರ್ಗಿಕ ಆಹಾರಗಳ ಉಪಯೋಗದೊಂದಿಗೆ ರಕ್ತಹೀನತೆಯನ್ನು ತಡೆಗಟ್ಟಬಹುದು, ಹಾಗೂ ಕಬ್ಬಿಣಾಂಶ ಹಾಗೂ ಹೀಮೋಗ್ಲೋಬಿನ್ ಅಂಶಗಳನ್ನೂ ಮನೆಯ ಆಹಾರಗಳಿಂದಲೇ ವೃದ್ಧಿಸಿಕೊಂಡು ಆರೋಗ್ಯಪೂರ್ಣರಾಗಬಹುದು.