ಮೊಡವೆ ನಿವಾರಣೆಗೆ  ಮನೆ ಮದ್ದುಗಳು :

ಸೊಪ್ಪು ತರಕಾರಿಯ ಲೇಪನ: ಈರುಳ್ಳಿ , ಪುದಿನ, ಜೇನುತುಪ್ಪ 

ಈರುಳ್ಳಿ ಹಾಗೂ ಪುದಿನಗಳನ್ನು ಚೆನ್ನಾಗಿ ತೊಳೆದುಕೊಂಡು ಬೇರೆ ಬೇರೆಯಾಗಿ ನೀರನ್ನು ಸೇರಿಸದೆಯೇ  ರುಬ್ಬಿಕೊಳ್ಳಿ. ನಂತರ ಎರಡನ್ನೂ ಅರ್ಧ ಚಮಚಗಳಷ್ಟು ತೆಗೆದುಕೊಂಡು ಒಂದು ಬಟ್ಟಲಲ್ಲಿ ಮಿಶ್ರಣ ಮಾಡಿ.  ಇದಕ್ಕೆ ಎರಡು ಹನಿಯಷ್ಟು ಜೇನುತುಪ್ಪವನ್ನು ಸೇರಿಸಿ ಕಲಸಿರಿ. ಈ ಮಿಶ್ರಣವನ್ನು ಮೊಡವೆ ಇರುವ ಜಾಗಕ್ಕೆ ಮಾತ್ರ ಹಚ್ಚಿರಿ. ಇದನ್ನು ಸ್ನಾನ ಮಾಡುವ ೨೦ ನಿಮಿಷಗಳ ಮುಂಚೆ ಹಚ್ಚಿ ಹಾಗೆಯೇ ಬಿಟ್ಟುಕೊಂಡು,ನಂತರ ಸ್ನಾನ ಮಾಡಿಕೊಳ್ಳಿ. ಸ್ನಾನಕ್ಕೆ ಕಡಲೆ ಹಿಟ್ಟನ್ನು ಉಪಯೋಗಿಸಿ, ಸಾಬೂನನ್ನು ಈ ಲೇಪನ ಹಚ್ಚಿದ ಜಾಗಕ್ಕೆ ಹಾಕಬೇಡಿ.

ಉಪಯೋಗಗಳು:

ಇದರಿಂದ ಪದೇಪದೇ ಒಂದೇ ಜಾಗದಲ್ಲಿ ಬಂದು ಹೋಗುವಂತಹ ಮೊಡವೆಗಳು ಮಾಯವಾಗುತ್ತವೆ. ಪುದಿನ ಹಾಗು ಈರುಳ್ಳಿಯ ತೀಕ್ಷ್ಣ ಗುಣವು ಮೊಡವೆಯ ಬೇರಿಗೆ ತಲುಪಿ ಮೊಡವೆಯನ್ನು ಹೋಗಿಸುತ್ತದೆ.

ಲೋಳೆಸರ ಲೇಪನ : ಕೊತ್ತಂಬರಿ ಸೊಪ್ಪು, ತುಳಸಿ ಎಲೆ, ಕಸ್ತೂರಿ ಅರಿಶಿಣ, ಲೋಳೆಸರ

ತುಳಸಿ ಹಾಗು ಕೊತ್ತಂಬರಿ ಸೊಪ್ಪನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಶುದ್ಧವಾಗಿ ತೊಳೆದುಕೊಂಡು ,ಎರಡನ್ನೂ ರುಬ್ಬಿಕೊಳ್ಳಿ. ಇನ್ನೊಂದು ಬಟ್ಟಲಲ್ಲಿ ಲೋಳೆಸರದ ತಿರುಳನ್ನು ಮಾತ್ರ ತೆಗೆದುಕೊಳ್ಳಿ ಹಾಗೂ ಅದನ್ನು ಕಿವುಚಿ ಮೆತ್ತಗೆ ಮಾಡಿಕೊಳ್ಳಿ. ಈ ತಿರುಳಿಗೆ ತುಳಸಿ-ಕೊತ್ತಂಬರಿ ರುಬ್ಬಿದ್ದನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಒಂದು ಚಿಟಿಕೆ ಕಸ್ತೂರಿ ಅರಿಶಿಣ ಸೇರಿಸಿ ಕಲಸಿರಿ. 

ಸ್ನಾನಕ್ಕೆ ಹೋಗುವ ೨೦ ನಿಮಿಷ ಮುಂಚೆ ಇದನ್ನು ದಪ್ಪವಾಗಿ ಮೊಡವೆಯ ಮೇಲೂ ಹಾಗು ತೆಳುವಾಗಿ ಪೂರ್ತಿ ಮುಖಕ್ಕೆ ಲೇಪಿಸಿಕೊಳ್ಳಿ. ನಂತರ ಕಡಲೆ ಹಿಟ್ಟಿನಲ್ಲಿ ಮುಖ ತೊಳೆದುಕೊಳ್ಳಿ.

ಉಪಯೋಗಗಳು:

ಇದು ಕಲೆಗಳನ್ನು ಉಳಿಸಿ ಹೋಗುವಂತಹ ನೀರಗುಳ್ಳೆ ತರಹದ ಮೊಡವೆಗಳನ್ನು ನಿವಾರಿಸುತ್ತದೆ ಹಾಗೂ ಕಲೆಗಳನ್ನು ನಿವಾರಿಸಿ ತ್ವಚೆಯ ಮೂಲ ಬಣ್ಣವನ್ನು ಮರಳಿಸುತ್ತದೆ. ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

ದಂತಮಂಜನ ಲೇಪನ

ಹಲ್ಲುಜ್ಜಲು  ಬಳಸುವ ದಂತ ಮಂಜನವನ್ನು ಮೊಡವೆಗಳು ಇರುವಲ್ಲಿ ಮಾತ್ರ ಹಚ್ಚಿ ೧೦-೨೦ ನಿಮಿಷ ಬಿಟ್ಟು ತೊಳೆದುಕೊಳ್ಳಿ .ಇದು ಮೊಡವೆಗಳನ್ನು ನಿವಾರಿಸುತ್ತದೆ.

ಮಂಜುಗಡ್ಡೆ ಲೇಪನ :

ಮಂಜುಗಡ್ಡೆಯನ್ನು ಒಂದು ಶುದ್ಧವಾದ ಬಟ್ಟೆಯಲ್ಲಿ ಇಟ್ಟುಕೊಂಡು ಅದರಿಂದ ಮೊಡವೆ ಇರುವ ಜಾಗದ ಮೇಲೆ ನಿಧಾನವಾಗಿ, ೧೦-೧೫ ನಿಮಿಷಗಳ ಕಾಲ  ಮಾಲಿಶ್ ಮಾಡಿಕೊಳ್ಳಿ. ಇದು ಅಲ್ಲಿನ ರಕ್ತಸಂಚಾರವನ್ನು ಹೆಚ್ಚಿಸಿ ಮೊಡವೆಗಳ ನಿವಾರಣೆಗೆ , ನೋವು ನಿವಾರಣೆಗೆ ಸಹಕಾರಿಯಾಗುತ್ತದೆ.

ದಾಲ್ಚಿನ್ನಿ ಚೂರ್ಣ ಲೇಪನ :

ದಾಲ್ಚಿನ್ನಿ ಚೂರ್ಣಕ್ಕೆ ಹನಿ ಹನಿಯಾಗಿ ಕೆಲವು ಹನಿ ಶುದ್ಧ ಜೇನುತುಪ್ಪ ಬೆರೆಸಿ , ಚೆನ್ನಾಗಿ ಲೇಪನದ ಹದ ಬರುವಷ್ಟು ಹಾಕಿ ಮಿಶ್ರಣ ಮಾಡಿಕೊಳ್ಳಿ. ಮೊಡವೆಗಳಿರುವಲ್ಲಿ ಮಾತ್ರ ಲೇಪಿಸಿ.೧೫-೨೦ ನಿಮಿಷಗಳ ಕಾಲ ಬಿಡಿ. ನಂತರ ಶುದ್ಧ ನೀರಲ್ಲಿ ತೊಳೆದುಕೊಳ್ಳಿ.

ಉಪಯೋಗ:

ಇದರಿಂದ ದಪ್ಪದಾದ ಮೊಡವೆಗಳು ನಿವಾರಣೆಯಾಗುತ್ತವೆ. 

ಜಾಯಿಕಾಯಿ ಲೇಪನ : 

ಜಾಯಿಕಾಯಿ

ನಿಂಬೆಹಣ್ಣು

ಕಸ್ತೂರಿ ಅರಿಶಿಣ 

ಒಂದು ಬಟ್ಟಲಲ್ಲಿ ೪-೫ ಹನಿ ನಿಂಬೆ ರಸ ತೆಗೆದುಕೊಳ್ಳಿ , ಇದಕ್ಕೆ ಒಂದು ಚಿಟಿಕೆಯಷ್ಟು ಕಸ್ತೂರಿಅರಿಶಿಣ ಬೆರೆಸಿರಿ. ಈ ರಸದಲ್ಲಿ ಜಾಯಿಕಾಯಿಯ ತಿರುಳನ್ನು ತೇಯಬೇಕು. ತೇಯುತ್ತಾ ಹದಕ್ಕೆ ತಕ್ಕಷ್ಟು ನಿಂಬೆ ರಸವನ್ನು ಸೇರಿಸುತ್ತಾ ಇರಿ. ನಂತರ ಈ ಲೇಪನವನ್ನು ಮೊಡವೆಗಳಿರುವ ಜಾಗಕ್ಕೆ ಮಾತ್ರ ಲೇಪಿಸಿಕೊಳ್ಳಿ.

ಇದು ಮೊಡವೆಗಳ ನಿವಾರಣೆಗೆ ಸಹಾಯಕಾರಿ.

 ಅತಿಮಧುರ ಚೂರ್ಣ ಮುಖ ಲೇಪನ:

ಅತೀಮಧುರ/ ಯಷ್ಠಿಮಧು ಚೂರ್ಣ 

ಪಪ್ಪಾಯ 

ಕಡಲೆ ಹಿಟ್ಟು

ಹೆಸರುಕಾಳು ಹಿಟ್ಟು 

ಎರಡು ಚಮಚದಷ್ಟು ಹಣ್ಣಾಗಿರುವ ಪಪ್ಪಾಯದ ತಿರುಳನ್ನು ಒಂದು ಬಟ್ಟಲಲ್ಲಿ ತೆಗೆದುಕೊಳ್ಳಿ , ಅದಕ್ಕೆ ಅರ್ಧ ಚಮಚದಷ್ಟು ಕಡಲೆ ಹಿಟ್ಟು ಹಾಗೂ ಹೆಸರು ಹಿಟ್ಟನ್ನು ಬೆರೆಸಿರಿ. ಇದಕ್ಕೆ ಕಾಲು ಚಮಚದಷ್ಟು ಯಷ್ಠಿಮಧು ಚೂರ್ಣ ಸೇರಿಸಿ ಮಿಶ್ರಣ ಮಾಡಿ.

ನಂತರ ಇದರಲ್ಲಿ ಸ್ವಲ್ಪವನ್ನೇ ತೆಗೆದುಕೊಂಡು ಮುಖದ ಮೇಲೆ ಉಜ್ಜಿಕೊಳ್ಳಿ, ಇದರಿಂದ ನಿರ್ಜೀವ ಚರ್ಮ ಕೋಶಗಳು ಹೊರಬರುತ್ತವೆ.

ಆಮೇಲೆ , ಪೂರ್ತಿಯಾಗಿ ಮುಖಕ್ಕೆ ಲೇಪಿಸಿಕೊಂಡು ೧೫-೨೦ ನಿಮಿಷಗಳ ಕಾಲ ಬಿಟ್ಟುಕೊಳ್ಳಿ. ಆನಂತರ ಕಡಲೆ ಹಿಟ್ಟನ್ನೇ ಉಪಯೋಗಿಸಿ ಮುಖ ತೊಳೆದುಕೊಳ್ಳಿ. ಇದು ಮೊಡವೆಗಳ ನಿವಾರಣೆಗೆ ಸಹಕರಿಸಿ ,ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಈ ಮೇಲಿನ ಎಲ್ಲಾ ಸುಲಭ ಪರಿಹಾರಗಳನ್ನು ಪ್ರಯತ್ನಿಸಿ. ಸುಲಭವಾಗಿ ಮನೆಯಲ್ಲೇ ಮಾಡಿಕೊಂಡು ತ್ವಚೆಯ ಆರೋಗ್ಯ ಹಾಗು ಕಾಂತಿಯನ್ನು ವೃದ್ಧಿಸಿಕೊಳ್ಳಬಹುದು .