ಶೀತ/ನೆಗಡಿ:
ಸಾಮಾನ್ಯವಾಗಿ ಶೀತ ಅಥವಾ ನೆಗಡಿಯು ವೈರಸ್ ಗಳ ಸೋಂಕಿನಿಂದ ಬರುತ್ತದೆ. ಈ ವೈರಸ್ ಗಳು ಕೂಡಾ ನೂರಾರು ಬಗೆಯದ್ದಾಗಿವೆ. ಈ ವೈರಸ್ ಗಳು ಶರೀರವನ್ನು ಹೊಕ್ಕಾಗ ದೇಹದ ರೋಗನಿರೋಧಕ ಶಕ್ತಿಯು ಈ ವೈರಾಣುಗಳನ್ನು ಹೊಡೆದೋಡಿಸಲು ಪ್ರಯತ್ನಿಸುತ್ತದೆ.ಹಾಗಾಗಿಯೇ ವಿಪರೀತ ಮೂಗು ಸೋರುವಿಕೆ,ಕಫದ ಉತ್ಪತ್ತಿಯಾಗುತ್ತಿರುತ್ತದೆ. ಸಾಮಾನ್ಯವಾಗಿ ಒಂದು ವಾರದಲ್ಲಿಯೇ ಇದು ಯಾವ ಔಷಧೋಪಚಾರ ಇಲ್ಲದಿದ್ದರೂ ತಾನಾಗಿಯೇ ಶಮನಗೊಳ್ಳುತ್ತದೆ ಮತ್ತು ಎಲ್ಲಾ ರೋಗಲಕ್ಷಣಗಳು ಮಾಯವಾಗುತ್ತವೆ .
ಈ ವೈರಾಣುಗಳು ಬಹು ಬೇಗ ಒಬ್ಬರಿಂದ ಇನ್ನೊಬರಿಗೆ ಹರಡುತ್ತವೆ.ಈ ಸೂಕ್ಷ್ಮಜೀವಿಗಳು ಸೋಂಕಿತರ ಸೀನಿನಲ್ಲಿ, ಕೆಮ್ಮಿನಲ್ಲಿ ಯಥೇಚ್ಚವಾಗಿರುತ್ತವೆ , ಸೋಂಕಿತ ವ್ಯಕ್ತಿಗಳು ಸೀನಿದಾಗ ,ಕೆಮ್ಮಿದಾಗ, ಹಸ್ತಲಾಘವ ನೀಡಿದಾಗ ಅಕ್ಕಪಕ್ಕದವರಿಗೆ ಇದು ಹರಡುತ್ತದೆ(ಅಂಟುರೋಗ/ ಸಾಂಕ್ರಾಮಿಕ ರೋಗ). ಹಾಗಾಗಿ ಸೋಂಕಿತರು ಸೀನುವಾಗ ಕೆಮ್ಮುವಾಗ ಕರವಸ್ತ್ರವನ್ನು ಉಪಯೋಗಿಸಬೇಕು , ಕೈಗಳನ್ನು ಸಾಬೂನಿನಿಂದ ತೊಳೆಯುತ್ತಿರಬೇಕು. ಇತರರು ಉಪಯೋಗಿಸುವ ವಸ್ತುಗಳನ್ನು ಮುಟ್ಟಬಾರದು .
ಅಲರ್ಜಿಯಿಂದಲೂ ಶೀತ ನೆಗಡಿ ಲಕ್ಷಣಗಳು ಕಂಡುಬರುತ್ತವೆ. ದೇಹದ ರೋಗನಿರೋಧಕ ವ್ಯವಸ್ತೆಯ ಅತೀಕ್ರಿಯಾಶೀಲತೆಯಿಂದಾಗಿ ಬರುತ್ತದೆ. ಕಾರಣವಿಲ್ಲದೆಯೇ ದೇಹವು ಹಾನಿಕಾರಕ ಅಲ್ಲದ ವಸ್ತುಗಳಾದ ಪರಾಗಗಳನ್ನು ಅಥವಾ ಧೂಳಿನ ಕಣಗಳನ್ನು ವೈರಾಣುಗಳೆಂದು ಭಾವಿಸಿ ಅದರೊಟ್ಟಿಗೆ ಸಮರ ಸಾರುತ್ತದೆ ಹಾಗೂ ನಮಗೆ ಅಲರ್ಜಿ ಉಂಟಾಗುತ್ತದೆ. ಶೀತ ನೆಗಡಿ ಕೆಮ್ಮಿನ ಲಕ್ಷಣಗಳು ಗೋಚರಿಸುತ್ತವೆ. ಅಲರ್ಜಿಗಳು ಸಾಂಕ್ರಾಮಿಕವಲ್ಲ.
ಮನೆ ಮದ್ದುಗಳು :
ಅಮೃತಬಳ್ಳಿ ಕಷಾಯ :
ಕಾಳುಮೆಣಸು
ಅರಿಶಿಣ
ಏಲಕ್ಕಿ
ಅಮೃತಬಳ್ಳಿಯ ಚೂರ್ಣ (ಹಸಿರು ಎಲೆಗಳು ಲಭ್ಯವಿದ್ದಲ್ಲಿ ಉಪಯೋಗಿಸಿ)/ ಬೆಟ್ಟದ ನೆಲ್ಲಿಕಾಯಿ ಚೂರ್ಣ
ಒಂದು ಪಾತ್ರೆಯಲ್ಲಿ ಒಂದು ಲೋಟ ಶುದ್ಧ ಕುಡಿಯುವ ನೀರನ್ನು ಕಾಯಲು ಇಟ್ಟುಕೊಳ್ಳಿ , ೭-೮ ಕಾಳುಮೆಣಸುಗಳನ್ನು ಮತ್ತು ಸಿಪ್ಪೆ ಸಮೇತ ಒಂದು ಏಲಕ್ಕಿಯನ್ನು ಜಜ್ಜಿಕೊಳ್ಳಿ ಹಾಗೂ ಕುದಿಯುತ್ತಿರುವ ನೀರಿಗೆ ಬೆರಸಿರಿ.ನಂತರ ಅರ್ಧ ಚಮಚದಷ್ಟು ಅಮೃತ ಬಳ್ಳಿಯ ಚೂರ್ಣ ಹಾಕಿರಿ. ಕಾಲು ಚಮಚ ಅರಿಶಿಣ ಬೆರೆಸಿರಿ.
ವಯಸ್ಕರರು ಈ ಕಷಾಯಕ್ಕೆ ಹಾಲನ್ನು ಬೆರೆಸಿ ಚಹಾದಂತೆ ಸೇವಿಸಬಹುದು.
ಮಕ್ಕಳಿಗೆ ಈ ಕಷಾಯಕ್ಕೆ , ಜೇನುತುಪ್ಪ/ ಕೆಂಪು ಕಲ್ಲುಸಕ್ಕರೆ ಬೆರೆಸಿ ಉಗುರು ಬೆಚ್ಚಗಿರುವಾಗ ಕುಡಿಸಬಹುದು.
ಉಪಯೋಗಗಳು:
ಅರಿಶಿಣ ಬ್ಯಾಕ್ಟೀರಿಯ ವೈರಾಣುಗಳನ್ನು ನಾಶಪಡಿಸುವಲ್ಲಿ ಸಹಕಾರಿ. ಅಮೃತಬಳ್ಳಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ತೀಕ್ಷ್ಣವಾಗಿರುವ ಕಾಳು ಮೆಣಸು ಸೇವಿಸುವ ಔಷಧಿಯನ್ನು ದೇಹಕ್ಕೆ ಪರಿಣಾಮಕಾರಿಯಾಗಿ ಸೇರಿಸುವಲ್ಲಿ ಸಹಾಯಕಾರಿಯಾಗಿದೆ. ಬಿಸಿಯಾದ ಕಷಾಯ ಸೇವನೆಯು ಗಂಟಲಿನಲ್ಲಿರುವ ರಕ್ತನಿಬಿಡತೆಯನ್ನು ಕಡಿಮೆ ಮಾಡಿ ಸರಾಗ ಪರಿಚಲನೆಗೆ ಸಹಾಯ ಮಾಡುತ್ತದೆ.
ಚಹಾ ಸೇವನೆಯ ಬದಲಿಗೆ ದಿನನಿತ್ಯ ಈ ಕಷಾಯ ಸೇವಿಸಿದಲ್ಲಿ ದೇಹದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ.
- ಚಿಕ್ಕ ಮಕ್ಕಳ ಶೀತ/ಗಂಟಲು ನೋವು/ಒಣಕೆಮ್ಮು ನಿವಾರಣೆಗೆ ಮನೆ ಮದ್ದು:
೪ ಒಣ ಖರ್ಜೂರ/ಉತ್ತತ್ತಿ
೧ ಚಮಚ ಕಲ್ಲಂಗಡಿ ಬೀಜ ಅಥವಾ ಒಣ ದ್ರಾಕ್ಷಿ
೪ ಬಾದಾಮಿ
ಅರ್ಧ ಚಮಚ ಕೆಂಪು ಕಲ್ಲು ಸಕ್ಕರೆ
ಮೇಲಿನ ಎಲ್ಲಾ ಪದಾರ್ಥಗಳನ್ನು ಲಘುವಾಗಿ ಜಜ್ಜಿಕೊಳ್ಳಿ.ಒಂದು ಬಟ್ಟಲಿಗೆ ಹಾಕಿಕೊಳ್ಳಿ .ಇದಕ್ಕೆ ಒಂದು ಚಿಟಿಕೆಯಷ್ಟು ಏಲಕ್ಕಿ ಪುಡಿಯನ್ನು ಬೆರೆಸಿ .ಅರ್ಧ ಚಮಚದಷ್ಟು ಶುದ್ಧ ಜೇನುತುಪ್ಪ ಸೇರಿಸಿ ಕಲಸಿರಿ. ಇದನ್ನು ಮಕ್ಕಳಿಗೆ ಉಂಡೆ ರೀತಿ ಮಾಡಿ ದವಡೆ ಬಳಿಇರಿಸಿ ಅದರ ರಸವನ್ನು ಮಕ್ಕಳು ಸೇವಿಸುವಂತೆ ನೋಡಿಕೊಳ್ಳಬೇಕು.
ಉಪಯೋಗ:
ಗಂಟಲು ನೋವು ಕೆರೆತವನ್ನು ಕಡಿಮೆ ಮಾಡುತ್ತದೆ .
ಶೀತ ನೆಗಡಿ ಕೆಮ್ಮು ನಿವಾರಿಸುತ್ತದೆ.
ಪೌಷ್ಟಿಕಾಂಶ ಆಹಾರವಾಗುತ್ತದೆ .
- ತುಳಸಿ-ಗರಿಕೆ ರಸ :
ಈ ಔಷಧಿಯು ಸೇವಿಸುವಂತದ್ದಲ್ಲ ಬದಲಾಗಿ ಮೂಗಿನ ಹೊಳ್ಳೆಗಳಿಗೆ ಬಿಡುವಂತದ್ದು . ಯಾವ ಮಕ್ಕಳಲ್ಲಿ ಪದೇಪದೇ ಶೀತ ನೆಗಡಿ ಕೆಮ್ಮು ಕಾಣಿಸುತ್ತಿರುತ್ತದೋ ಅವರಿಗೆ ಇದು ಒಳ್ಳೆಯ ಔಷಧಿ.
ಸಮಪ್ರಮಾಣದ ತುಳಸಿ ಹಾಗೂ ಗರಿಕೆಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಜಜ್ಜಿಕೊಂಡು ಒಂದು ಬಟ್ಟೆಯಲ್ಲಿ ಕಟ್ಟಿ ಹಿಂಡಿ ರಸವನ್ನು ಒಂದು ಬಟ್ಟಲಲ್ಲಿ ತೆಗೆದು , ತಾಯಿಯು ದಿನಕ್ಕೆ ಒಂದೇ ಒಂದು ಸಾರಿ ತನ್ನ ಕಿರು ಬೆರಳಿನಿಂದ ಎಷ್ಟು ಬರುತ್ತದೋ ಅಷ್ಟನ್ನಷ್ಟೇ ,ತನ್ನ ಮೂರು ವರ್ಷ ಮೇಲ್ಪಟ್ಟ ಮಕ್ಕಳ ಮೂಗಿನ ಹೊಳ್ಳೆಗಳಿಗೆ ಬಿಡಬೇಕು .
ನೆಗಡಿ ನಿವಾರಣೆಗೆ ವಿಶೇಷ ತಾಂಬೂಲ :
ವೀಳ್ಯದೆಲೆ
ಜೇನು ತುಪ್ಪ
ಹರಳು ಉಪ್ಪು
ಕಾಳುಮೆಣಸಿನ ಚೂರ್ಣ
ಅರಿಶಿಣ
ಏಲಕ್ಕಿ ಪುಡಿ
ಶುದ್ಧವಾದ ಒಂದು ವೀಳ್ಯದೆಲೆಗೆ ಜೇನುತುಪ್ಪ ಸವರಬೇಕು , ಒಂದು ಚಿಟಿಕೆ ಅರಿಶಿಣ ಇದರ ಮೇಲೆ ಉದುರಿಸಿ, ಒಂದು ಚಿಟಿಕೆಯಷ್ಟು ಕಾಳು ಮೆಣಸಿನ ಚೂರ್ಣ ಹಾಕಿ,೧ ಚಿಟಿಕೆ ಏಲಕ್ಕಿ ಪುಡಿ ನಂತರ ರುಚಿಗೆ ಸ್ವಲ್ಪ ಹರಳುಪ್ಪು ಹಾಕಿರಿ. ವೀಳ್ಯದೆಲೆಯ ತುಂಬನ್ನು ಮುರಿದು ಕಂಕಣದ ರೀತಿ ಸುರುಳಿಯಾಕಾರವಾಗಿ ಸುತ್ತಿರಿ.
ಇದನ್ನು ಹಂತ ಹಂತವಾಗಿ ಸ್ವಲ್ಪ ಸ್ವಲ್ಪವನ್ನೇ ಕಚ್ಚಿ ಅಗೆದು ತಿನ್ನಬೇಕು. ಒಂದೇಬಾರಿಗೆ ತಿನ್ನಬಾರದು.
ಉಪಯೋಗ :
ಏಲಕ್ಕಿ ಅಲರ್ಜಿ ನಿವಾರಕವಾಗಿದೆ . ಗಂಟಲು ಕಿರಿಕಿರಿ ಕಫ-ಕೆಮ್ಮು ನಿವಾರಣೆಗೆ ಸಹಕಾರಿ.


